ಪೆಗ್ಮಟೈಟ್ -
ಬೆಣಚುಹರಳು ಮತ್ತು ಫೆಲ್ಡ್‍ಸ್ಟಾರುಗಳ ದೊಡ್ಡ ದೊಡ್ಡ ಕಣಗಳನ್ನು ಒಳಗೊಂಡು ಕಣಶಿಲೆಗಳನ್ನು ಭೇದಿಸಿ ಬರುವ ಶಿಲಾಸಿರ. ಇದು ಅನೇಕ ವೇಳೆ ಅಭ್ರಕ, ಬೆರಿಲ್ ಮತ್ತು ಕೊಲಂಬೈಟ್, ಸಾಮರ್‍ಸ್ಕೈಟ್ ಮುಂತಾದ ಅಪರೂಪ ಮೂಲಧಾತು ಖನಿಜಗಳನ್ನೂ ಒಳಗೊಂಡಿರುತ್ತದೆ.  1813 ರಲ್ಲಿ ಬ್ರೋನ್ಯಾರ್ ಎಂಬಾತ ತನ್ನ ಲೇಖನದಲ್ಲಿ ಈ ಹೆಸರನ್ನು ಬಳಕೆಗೆ ತಂದು ಇದನ್ನು ತರಗತಿಯ ಪ್ರವಚನಕ್ಕೆ ಮಾತ್ರ ಮಿತಿಗೊಳಿಸಿದ್ದ.  ದೊಡ್ಡ ದೊಡ್ಡ ಫೆಲ್‍ಸ್ಟಾರ್ ಹರಳುಗಳು ಮತ್ತು ಬೆಣಚುಗಳ ರಚನೆಯಿಂದಾದ ಶಿಲೆಗಳನ್ನು ಪೆಗ್ಮಟೈಟ್ ಎಂಬುವುದಾಗಿ ಹೆಸರಿಸಲಾಯಿತು.  1822 ರಲ್ಲಿ ಡ ಆಬಿಸನ್ ಮತ್ತು ಆಹ್ವೀ ಎಂಬವರು ಸಹ ಇದೇ ಅರ್ಥದಲ್ಲಿ ಪೆಗ್ಮಟೈಟ್ ಪದವನ್ನು ಬಳಸಿದರು. ಇದನ್ನು ಹೆಚ್ಚು ಅರ್ಥಪೂರ್ಣವಾಗಿ ಬಳಸಿದವ (1845) ಹೈಡಿಂಜರ್. ಫೆಲ್‍ಸ್ಪಾರ್ ಖನಿಜಗಳು ಯಥೇಚ್ಛವಾಗಿರುವ, ಒರಟು ಕಣಗಳಿಂದ ಕೂಡಿದ ಗ್ರ್ಯಾನೈಟ್ ಶಿಲೆಗಳಿಗೆ ಪೆಗ್ಮಟೈಟ್ ಎಂಬ ಹೆಸರನ್ನು ಈತನೇ ಸೂಚಿಸಿದ. 

ಆರ್ಥೊಕ್ಲೇಸ್ ಫೆಲ್ಡ್‍ಸ್ಪಾರ್, ಬೆಣಚು ಮತ್ತು ಬೆಳ್ಳಿಯ ಹೊಳಪುಳ್ಳ ಅಭ್ರಕ ಮುಂತಾದ ದೊಡ್ಡ ಖನಿಜಗಳನ್ನು ಒಳಗೊಂಡ ಶಿಲೆಗಳನ್ನು ಈ ಮೇಲೆ ಹೇಳಲಾದ ಗ್ರ್ಯಾನೈಟುಗಳಲ್ಲಿ ಸೇರಿಸಲಾಗಿದೆ.  ಸಾಮಾನ್ಯವಾಗಿ ಪೆಗ್ಮಟೈಟುಗಳ ಡೈಕುಗಳ ರೂಪದಲ್ಲಿ (ಅಂದರೆ, ಸ್ಥಳೀಯ ಶಿಲೆಗಳನ್ನು ಭೇದಿಸಿರುವ ಗೋಡೆ ಆಕಾರದ ಅಂತಸ್ಸರಣ ಅಗ್ನಿಶಿಲೆ) ಮತ್ತು ಇನ್ನಿತರ ಅಗ್ನಿಶಿಲೆಗಳಲ್ಲಿ ಆಶ್ರಯ ಪಡೆದಿರುತ್ತವೆ.  ಇದೇ ಅರ್ಥದಲ್ಲಿ ನಾಮನ್, ಜಿರ್ ಕೆಲ್, ರೋಸನ್ ಬುಷ್, ಗೋಲ್ಡ್‍ಷ್ಮಿಟ್ ಮತ್ತು ಇನ್ನೂ ಅನೇಕ ಲೇಖಕರೂ ಸಹ ಪೆಗ್ಮಟೈಟ್ ಎಂಬ ಹೆಸರನ್ನು ಬಳಸಿದರು.
ಪೆಗ್ಮಟೈಟ್ (ಅಥವಾ ದೈತ್ಯ ಕಣಶಿಲೆ) ಗ್ರ್ಯಾನೈಟ್ ಶಿಲೆಯ ಮಾದರಿಯದಾಗಿದೆ.  ಇದರ ಒರಟಾದ ಒಳರಚನೆ ಮತ್ತು ವಿಶೇಷ ಉತ್ಪತ್ತಿಯಿಂದಾಗಿ, ಗಣಿ ಉದ್ಯಮದಲ್ಲಿ ಪೆಗ್ಮಟೈಟ್ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಕೆಲವು ಪೆಗ್ಮಟೈಟ್ ಡೈಕುಗಳು ಅತಿ ದೊಡ್ಡವಾಗಿರುವುದೂ ಇದಕ್ಕೆ ಕಾರಣ. ಸಾಮಾನ್ಯವಾಗಿ ಗ್ರ್ಯಾನೈಟಿನಲ್ಲಿರುವ ಖನಿಜಗಳೇ ಪೆಗ್ಮಟೈಟಿನಲ್ಲಿ ಕಂಡುಬಂದರೂ ಇದರಲ್ಲಿ (ಪೆಗ್ಮಟೈಟ್) ಇರುವ ಕೆಲವು ವಿಶೇಷ ಖನಿಜಗಳು ಗ್ರ್ಯಾನೈಟಿನಲ್ಲಿರುವುದಿಲ್ಲ. ಎಂದೇ ಪೆಗ್ಮಟೈಟ್ ಖನಿಜಗಳ ಆಕರವೆಂದು ಪ್ರಸಿದ್ಧವಾಗಿದೆ.

ಪೆಗ್ಮಟೈಟುಗಳಲ್ಲಿ ಲಭ್ಯವಾದ ಪ್ರಧಾನ ಖನಿಜಗಳನ್ನೂ ಉಪಖನಿಜಗಳನ್ನೂ ಒಳಗೊಂಡ ಸುಧೀರ್ಘ ಪಟ್ಟಿಯನ್ನೇ ತಯಾರಿಸಲಾಗಿದೆ.  ಆದರೆ, ಆ ಪೈಕಿ ಕೆಲವು ಮುಖ್ಯ ಖನಿಜಗಳ ಹೆಸರುಗಳನ್ನು ಮಾತ್ರ ಇಲ್ಲಿ ಕೊಡಬಹುದು, ಅಷ್ಟೆ. ಉದಾಹರಣೆ ಫೆಲ್‍ಸ್ಪಾರ್, ಬೆಣಚು, ಅಭ್ರಕಗಳು (ಶ್ವೇತ ಮತ್ತು ಲೆಫಿಡೊಲೈಟ್), ಟೂರ್‍ಮಲಿನ್, ಪುಷ್ಯರಾಗ, ಗಾರ್ನೆಟ್, ಬೆರಿಲ್, ಫ್ಲೂರೈಟ್, ಸ್ಟಾಡ್ಯೂಮಿನ್, ಕೊಲಂಬೈಟ್, ಸಾಮರ್‍ಸ್ಕೈಟ್, ಟ್ಯಾಂಟಲೈಟ್ ಅಲ್‍ನೈಟ್ ಟ್ರೆಪ್ಲೈಟ್ ಇವೇ ಮುಂತಾದವು ಪೆಗ್ಮಟೈಟಿನಲ್ಲಿ ಸಿಗುವ ಸ್ಫಟಿಕಗಳು ಸಾಮಾನ್ಯವಾಗಿ ಪರಿಪೂರ್ಣವಾಗಿದ್ದು ದೊಡ್ಡದಾಗಿರುತ್ತವೆ.  ಇವುಗಳ ಪೈಕಿ ಕೆಲವು ದೈತ್ಯ ಗಾತ್ರದ ಖನಿಜಗಳು ಖನಿಜಪ್ರಪಂಚದಲ್ಲಿ ದಾಖಲೆಯನ್ನೇ ಸ್ಥಾಪಿಸಿವೆ.  ಉದಾಹರಣೆಗೆ ಕೆಲವು ಫೆಲ್‍ಸ್ಪಾರ್ ಖನಿಜಗಳು ಸಾಮಾನ್ಯವಾಗಿ 30 ಸೆಂ.ಮೀ. ಮತ್ತು ಅದಕ್ಕಿಂತ ಹೆಚ್ಚು ಉದ್ದವಿರುತ್ತವೆ.

ಪೆಗ್ಮಟೈಟುಗಳ ವಿಸ್ತಾರ : ಬಿಹಾರಿನ ಒಂದು ಅಭ್ರಕ ವಲಯ. 96.5 ಕಿ.ಮೀ. ಉದ್ದ ಮತ್ತು 19 ಕಿ.ಮೀ. ಅಗಲವಿದ್ದು ಹಜಾರಿಭಾಗ್, ಗಯಾ ಮತ್ತು ಮಾಂಗೀರ್ ಜಿಲ್ಲೆಗಳ ಮೂಲಕ ಅಡ್ಡ ಹಾಯ್ದಿದೆ. ಈ ಪೆಗ್ಮಟೈಟುಗಳು ಬಹುಶಃ ಛೋಟನಾಗಪುರದ ಗ್ರ್ಯಾನೈಟ್ ಶಿಲೆಗಳಿಗೆ ಸಂಬಂಧಿಸಿದಂತೆ ಕಂಡುಬರುತ್ತವೆ. ಇವಕ್ಕಿಂತಲೂ ದೊಡ್ಡದಾದ ಪೆಗ್ಮಟೈಟುಗಳು 610ಮೀ ಉದ್ದವಿರುತ್ತದೆ.

ಪೆಗ್ಮಟೈಟ್ ರಚನೆ : ಅನೇಕ ಪೆಗ್ಮಟೈಟುಗಳು ಗ್ರ್ಯಾನೈಟ್ ಅಂತಸ್ಸರಣಗಳನ್ನು ಆವರಿಸಿರುವ ರೂಪಾಂತರ ಶಿಲೆಗಳ (ಹೆಚ್ಚಾಗಿ ಷಿಸ್ಟ್‍ಗಳು) ಬಿರುಕುಗಳಲ್ಲಿ ತುಂಬಿರುತ್ತವೆ.  ಆದರೆ, ಕೆಲವು ಮಾತ್ರ ಗ್ರ್ಯಾನೈಟುಗಳಲ್ಲೂ ಇರುತ್ತವೆ.  ಈ ಎರಡರ ಪೈಕಿ ಯಾವುದೇ ಪರಿಸ್ಥಿತಿಯಲ್ಲೂ ಇನ್ನೂ ದ್ರವರೂಪದಲ್ಲಿರುವ ಅಂತಸ್ಸರಣ ಶಿಲೆಗಳ ಹೊರ ಭಾಗಗಳಲ್ಲಿ ಸ್ಫಟಿಕೀಕರಣವಾಗಿ ಗಾತ್ರದಲ್ಲಿ ಕುಗ್ಗುವುದರಿಂದ, ಪೆಗ್ಮಟೈಟ್ ರೂಪುಗೊಳ್ಳುತ್ತವೆ. ಕುಗ್ಗುವಿಕೆಯ ಪರಿಣಾಮವಾಗಿ ಬಿರುಕುಗಳು ಉಂಟಾಗಿ, ಅವು ಹೆಚ್ಚು ಅಗಲವಾಗುತ್ತವೆ.  ಆಗ, ಈ ಪೆಗ್ಮಟೈಟುಗಳು ಆ ಬಿರುಕುಗಳ ಒಳಭಾಗಗಳಿಗೆ ಸುಲಭವಾಗಿ ನುಗ್ಗುತ್ತವೆ ಮತ್ತು ಅವು ತಮ್ಮ ಸುತ್ತಮುತ್ತಲಿನ ಶಿಲೆಗಳನ್ನೂ ಭೇದಿಸುತ್ತವೆ ಅಥವಾ ಅಂಥ ಶಿಲೆಗಳಲ್ಲಿ ಈಗಾಗಲೇ ಉಂಟಾಗಿದ್ದ ಬಿರುಕುಗಳನ್ನು ಒಂದುಗೂಡಿಸುವುದರಿಂದ, ಈ ಪೆಗ್ಮಟೈಟುಗಳು ಹೆಚ್ಚಾಗಿ ಹೊರಚಾಚಿರುವುದು ಕಂಡುಬರುತ್ತದೆ.  ಪೆಗ್ಮಟೈಟುಗಳು ಭೂಮಿಯ ಅನೇಕ ಭಾಗಗಳಲ್ಲಿ ದೊರೆಯುತ್ತವೆ.  ವಾಣಿಜ್ಯದ ಅತಿ ಮುಖ್ಯ ಖನಿಜಗಳು ಪೆಗ್ಮಟೈಟ್ ಡೈಕುಗಳಲ್ಲಿ ಹೇರಳವಾಗಿ ದೊರೆಯುತ್ತವೆ.

ಉಪಯೋಗಗಳು : ಪೆಗ್ಮಟೈಟುಗಳಲ್ಲಿ ದೊರೆಯುವ ಫೆಲ್‍ಸ್ಟಾರ್ ಖನಿಜವನ್ನು ಪಿಂಗಾಣಿ ಸಾಮಾನುಗಳಿಗೆ ಮೆರಗು ನೀಡಲು ಬಳಸಿದರೆ ಅಭ್ರಕವನ್ನು ವಿದ್ಯುತ್ ಕೈಗಾರಿಕೆಗಳಲ್ಲಿ (ವಿದ್ಯುತ್ ಉಪಕರಣಗಳಲ್ಲಿ ಶಾಖ ನಿರೋಧಕ ವಸ್ತುವಾಗಿ) ಬಳಸುತ್ತಾರೆ.  ಪುಷ್ಯರಾಗ ಮತ್ತು ಬೆರಿಲುಗಳಿಗೆ ರತ್ನಾಭರಣಗಳ ತಯಾರಿಕೆಯಲ್ಲಿ ಉಪಯೋಗ ಉಂಟು.  ಅಪಟೈಟ್ ಖನಿಜವನ್ನು ರಾಸಾಯನಿಕ ಗೊಬ್ಬರಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.  ಫ್ಲೂರೈಟ್ ಖನಿಜವನ್ನು ಲೋಹಗಳನ್ನು ದ್ರವೀಕರಿಸಲು ಸ್ರಾವಕ ವಸ್ತುವಾಗಿಯೂ ಇದರ ಆಮ್ಲವನ್ನು ಕುಶಲಕಲೆಗಳಲ್ಲಿ ಕೊರೆವ ವಸ್ತುವಾಗಿಯೂ ಬಳಸುತ್ತಾರೆ. ಪೆಗ್ಮಟೈಟುಗಳಲ್ಲಿ ಮಾತ್ರ ಸಿಗುವ ಯುರನೈಟ್ ಖನಿಜ ರೇಡಿಯಮ್ ಧಾತುವಿನ ಮುಖ್ಯ ಮೂಲವಾಗಿದೆ.
(ಎಂ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ